iPadನಲ್ಲಿ VoiceOver ಅನ್ನು ಆನ್ ಮಾಡಿ ಮತ್ತು ಅಭ್ಯಾಸ ಮಾಡುವುದು

ಜೆಸ್ಚರ್-ಆಧಾರಿತ ಸ್ಕ್ರೀನ್ ರೀಡರ್ ಆಗಿರುವ VoiceOver ಮೂಲಕ ನಿಮಗೆ ಸ್ಕ್ರೀನ್ ಕಾಣದಿದ್ದರೂ ಸಹ ನೀವು iPad ಅನ್ನು ಬಳಸಬಹುದು. ನಿಮ್ಮ ಸ್ಕ್ರೀನ್‌ನಲ್ಲಿ ಇರುವ ಕಂಟೆಂಟ್‌ನ ಆಲಿಸಬಹುದಾದ ವಿವರಣೆಗಳನ್ನು VoiceOver ನೀಡುತ್ತದೆ. ಉದಾಹರಣೆಗೆ, ಬ್ಯಾಟರಿ ಮಟ್ಟ ಎಷ್ಟಿದೆ, ಯಾರು ಕರೆ ಮಾಡುತ್ತಿದ್ದಾರೆ ಅಥವಾ ನಿಮ್ಮ ಬೆರಳು ಯಾವ ಐಟಮ್ ಮೇಲಿದೆ ಎಂಬುದನ್ನು ಆಲಿಸಿ. ನಿಮ್ಮ ಅಗತ್ಯಗಳಿಗೆ ಸರಿಹೊಂದುವಂತೆ ನೀವು VoiceOverನ ಮಾತನಾಡುವ ಧ್ವನಿಯನ್ನು ಸಹ ಕಸ್ಟಮೈಸ್ ಮಾಡಬಹುದು.

ನೀವು ಸ್ಕ್ರೀನ್ ಅನ್ನು ಸ್ಪರ್ಶಿಸಿದಾಗ ಅಥವಾ ಅದರ ಮೇಲೆ ನಿಮ್ಮ ಬೆರಳನ್ನು ಡ್ರ್ಯಾಗ್ ಮಾಡಿದಾಗ, ಐಕಾನ್‌ಗಳು ಮತ್ತು ಪಠ್ಯ ಸೇರಿದಂತೆ ನಿಮ್ಮ ಬೆರಳು ಯಾವುದರ ಮೇಲಿರುತ್ತದೆಯೋ ಆ ಐಟಮ್‌ನ ಹೆಸರನ್ನು VoiceOver ಹೇಳುತ್ತದೆ. ಬಟನ್ ಅಥವಾ ಲಿಂಕ್ ರೀತಿಯ ಐಟಮ್‌ನೊಂದಿಗೆ ಸಂವಹನ ನಡೆಸಲು ಅಥವಾ ಬೇರೆ ಐಟಮ್‌ಗೆ ನ್ಯಾವಿಗೇಟ್ ಮಾಡಲು, VoiceOver ಜೆಸ್ಚರ್‌ಗಳನ್ನು ಬಳಸಿ.

ನೀವು ಹೊಸ ಸ್ಕ್ರೀನ್‌ಗೆ ಹೋದಾಗ, VoiceOver ಒಂದು ಸೌಂಡ್ ಅನ್ನು ಪ್ಲೇ ಮಾಡುತ್ತದೆ, ನಂತರ ಸ್ಕ್ರೀನ್ ಮೇಲಿರುವ ಮೊದಲ ಐಟಮ್ (ಸಾಮಾನ್ಯವಾಗಿ ಮೇಲಿನ ಎಡ ಮೂಲೆಯಲ್ಲಿ) ಅನ್ನು ಆಯ್ಕೆಮಾಡುತ್ತದೆ ಮತ್ತು ಅದರ ಹೆಸರನ್ನು ಮಾತಿನಲ್ಲಿ ಹೇಳುತ್ತದೆ. ಸ್ಕ್ರೀನ್ ಲ್ಯಾಂಡ್‌ಸ್ಕೇಪ್ ಅಥವಾ ಪೋರ್ಟ್ರೇಟ್ ಓರಿಯೆಂಟೇಶನ್‌ಗೆ ಬದಲಾದಾಗ, ಸ್ಕ್ರೀನ್ ಮಸುಕಾದಾಗ ಅಥವಾ ಲಾಕ್ ಆದಾಗ ಮತ್ತು ನೀವು iPad ಅನ್ನು ಎಚ್ಚರಗೊಳಿಸಿದಾಗ ಲಾಕ್ ಸ್ಕ್ರೀನ್‌ನಲ್ಲಿ ಏನು ಸಕ್ರಿಯವಾಗಿದೆ ಎಂಬುದನ್ನು VoiceOver ನಿಮಗೆ ತಿಳಿಸುತ್ತದೆ.

VoiceOver ಅನ್ನು ಆನ್ ಅಥವಾ ಆಫ್ ಮಾಡುವುದು

ಪ್ರಮುಖ ಸೂಚನೆ: ನೀವು iPad ಅನ್ನು ನಿಯಂತ್ರಿಸಲು ಬಳಸುವ ಜೆಸ್ಚರ್‌ಗಳನ್ನು VoiceOver ಬದಲಾಯಿಸುತ್ತದೆ. VoiceOver ಆನ್ ಆಗಿರುವಾಗ, iPad ಅನ್ನು ಬಳಸಲು ನೀವು VoiceOver ಜೆಸ್ಚರ್‌ಗಳನ್ನು ಬಳಸಬೇಕು.

VoiceOver ಅನ್ನು ಆನ್ ಅಥವಾ ಆಫ್ ಮಾಡಲು, ಈ ಕೆಳಗಿನವುಗಳಲ್ಲಿ ಯಾವುದಾದರೂ ಒಂದನ್ನು ಮಾಡಿ:

  • ಸೆಟ್ಟಿಂಗ್ಸ್  > ಆ್ಯಕ್ಸೆಸಬಿಲಿಟಿ > VoiceOver ಎಂಬಲ್ಲಿಗೆ ಹೋಗಿ, ನಂತರ VoiceOver ಅನ್ನು ಆನ್ ಅಥವಾ ಆಫ್ ಮಾಡಿ.

  • ನೀವು ಕಂಟ್ರೋಲ್ ಸೆಂಟರ್ನಲ್ಲಿ VoiceOver ಅನ್ನು ಸೇರಿಸಿದ್ದಲ್ಲಿ ಅದನ್ನು ಬಳಸಿ.

  • ನೀವು VoiceOver ಅನ್ನು ಆನ್ ಮಾಡಲು ಆ್ಯಕ್ಸೆಸಬಿಲಿಟಿ ಶಾರ್ಟ್‌ಕಟ್ ಅನ್ನು ಸೆಟಪ್ ಮಾಡಿದ್ದರೆ, ಅದನ್ನು ಬಳಸಿ.

Siri: ಈ ರೀತಿ ಏನಾದರೂ Siriಗೆ ಕೇಳಿ, “Turn on VoiceOver.” Siriಯನ್ನು ಬಳಸುವುದು ಹೇಗೆ ಎಂಬುದನ್ನು ತಿಳಿಯಿರಿ.

VoiceOver ಆನ್ ಆಗಿರುವಾಗ Siriಗೆ ತಿಳಿದಿರುತ್ತದೆ ಮತ್ತು ಸ್ಕ್ರೀನ್ ಮೇಲೆ ಕಾಣಿಸುವುದಕ್ಕಿಂತ ಹೆಚ್ಚಿನ ಮಾಹಿತಿಯನ್ನು ನಿಮಗೆ ಆಗಿಂದಾಗ್ಗೆ ಓದಿ ತಿಳಿಸುತ್ತದೆ. ಸ್ಕ್ರೀನ್ ಮೇಲೆ Siri ತೋರಿಸುವುದನ್ನು ಓದಲು ಸಹ ನೀವು VoiceOver ಅನ್ನು ಬಳಸಬಹುದು.

VoiceOver ಬಗ್ಗೆ ತಿಳಿಯಲು ಸಂವಾದಾತ್ಮಕ ಟ್ಯುಟೋರಿಯಲ್ ಒಂದನ್ನು ಬಳಸುವುದು

ನೀವು ಸಂವಾದಾತ್ಮಕ VoiceOver ಟ್ಯುಟೋರಿಯಲ್ ಮೂಲಕ VoiceOverನ ಬೇಸಿಕ್‌ಗಳನ್ನು ಕಲಿಯಬಹುದು ಮತ್ತು ಅಗತ್ಯವಾದ ಜೆಸ್ಚರ್‌ಗಳನ್ನು ಅಭ್ಯಾಸ ಮಾಡಬಹುದು.

VoiceOver ಆನ್ ಆಗಿರುವಾಗ, ಸೆಟ್ಟಿಂಗ್ಸ್  > ಆ್ಯಕ್ಸೆಸಬಿಲಿಟಿ > VoiceOver ಎಂಬಲ್ಲಿಗೆ ಹೋಗಿ, ನಂತರ ಪ್ರಾರಂಭಿಸಲು VoiceOver ಟ್ಯುಟೋರಿಯಲ್ ಅನ್ನು ಟ್ಯಾಪ್ ಮಾಡಿ.

VoiceOver ಜೆಸ್ಚರ್‌ಗಳನ್ನು ಅಭ್ಯಾಸ ಮಾಡಿ

ಯಾವುದೇ ಆ್ಯಕ್ಷನ್ ಅನ್ನು ನಿರ್ವಹಿಸದೆ ಅಥವಾ iPad ಮೇಲೆ ಪರಿಣಾಮ ಬೀರದೆಯೇ ನೀವು VoiceOver ಜೆಸ್ಚರ್‌ಗಳನ್ನು ಸುರಕ್ಷಿತವಾಗಿ ಬಳಸಿ ನೋಡಲು ಮತ್ತು ಅವುಗಳು ಏನು ಮಾಡುತ್ತವೆ ಎಂಬುದನ್ನು ಆಲಿಸಲು VoiceOver ಅಭ್ಯಾಸ ಪ್ರದೇಶವನ್ನು ಬಳಸಬಹುದು.

ನಿಮಗೆ ಯಾವುದು ಹೆಚ್ಚು ಸೂಕ್ತವಾಗಿದೆ ಎಂಬುದನ್ನು ಅನ್ವೇಷಿಸಲು ವಿವಿಧ ಕಾರ್ಯವಿಧಾನಗಳನ್ನು ಪ್ರಯತ್ನಿಸಿ. ಜೆಸ್ಚರ್ ಕೆಲಸ ಮಾಡದಿದ್ದರೆ, ವಿಶೇಷವಾಗಿ ಡಬಲ್ ಟ್ಯಾಪ್ ಅಥವಾ ಸ್ವೈಪ್ ಜೆಸ್ಚರ್‌ಗಾಗಿ ತ್ವರಿತ ಚಲನೆಯನ್ನು ಪ್ರಯತ್ನಿಸಿ. ಸ್ವೈಪ್ ಮಾಡಲು, ನಿಮ್ಮ ಬೆರಳು ಅಥವಾ ಬೆರಳುಗಳನ್ನು ಸ್ಕ್ರೀನ್ ಮೇಲೆ ತ್ವರಿತವಾಗಿ ಹಾಯಿಸಲು ಪ್ರಯತ್ನಿಸಿ. ಅನೇಕ ಬೆರಳುಗಳ ಜೆಸ್ಚರ್‌ಗಳನ್ನು ಬಳಸಿಕೊಂಡು ಉತ್ತಮ ಫಲಿತಾಂಶಗಳನ್ನು ಪಡೆಯಲು, ನಿಮ್ಮ ಬೆರಳುಗಳ ನಡುವೆ ಸ್ವಲ್ಪ ಅಂತರವಿಟ್ಟುಕೊಂಡು ಸ್ಕ್ರೀನ್ ಅನ್ನು ಸ್ಪರ್ಶಿಸಿ.

  1. ಸೆಟ್ಟಿಂಗ್ಸ್  > ಆ್ಯಕ್ಸೆಸಬಿಲಿಟಿ > VoiceOver ಎಂಬುದಕ್ಕೆ ಹೋಗಿ.

  2. VoiceOver ಅನ್ನು ಆನ್ ಮಾಡಿ, VoiceOver ಅಭ್ಯಾಸವನ್ನು ಟ್ಯಾಪ್ ಮಾಡಿ, ನಂತರ ಪ್ರಾರಂಭಿಸಲು ಡಬಲ್-ಟ್ಯಾಪ್ ಮಾಡಿ.

  3. ಈ ಕೆಳಗಿನ ಜೆಸ್ಚರ್‌ಗಳನ್ನು ಒಂದು, ಎರಡು, ಮೂರು ಮತ್ತು ನಾಲ್ಕು ಬೆರಳುಗಳಿಂದ ಅಭ್ಯಾಸ ಮಾಡಿ:

    • ಟ್ಯಾಪ್

    • ಡಬಲ್ ಟ್ಯಾಪ್

    • ಟ್ರಿಪಲ್ ಟ್ಯಾಪ್

    • ಎಡಕ್ಕೆ, ಬಲಕ್ಕೆ, ಮೇಲಕ್ಕೆ ಅಥವಾ ಕೆಳಕ್ಕೆ ಸ್ವೈಪ್ ಮಾಡಿ

  4. ನೀವು ಅಭ್ಯಾಸವನ್ನು ಪೂರ್ಣಗೊಳಿಸಿದಾಗ, ಮುಗಿದಿದೆ ಎಂಬುದನ್ನು ಟ್ಯಾಪ್ ಮಾಡಿ, ನಂತರ ನಿರ್ಗಮಿಸಲು ಡಬಲ್ ಟ್ಯಾಪ್ ಮಾಡಿ.