iPhone ಬ್ಯಾಟರಿ ಮತ್ತು ಪರ್ಫಾರ್ಮೆನ್ಸ್
iPhone ಪರ್ಫಾರ್ಮೆನ್ಸ್ ಮತ್ತು ಅದು ನಿಮ್ಮ ಬ್ಯಾಟರಿಯೊಂದಿಗೆ ಹೊಂದಿರುವ ಸಂಬಂಧವನ್ನು ಅರ್ಥಮಾಡಿಕೊಳ್ಳಿ.
ನಿಮ್ಮ iPhone ಅನ್ನು ಬಳಸಲು ಸರಳ ಮತ್ತು ಸುಲಭವಾಗುವಂತೆ ವಿನ್ಯಾಸಗೊಳಿಸಲಾಗಿದೆ. ಸುಧಾರಿತ ತಂತ್ರಜ್ಞಾನಗಳು ಮತ್ತು ಅತ್ಯಾಧುನಿಕ ಎಂಜಿನಿಯರಿಂಗ್‌ನ ಸಂಯೋಜನೆಯಿಂದ ಮಾತ್ರ ಇದು ಸಾಧ್ಯ. ಬ್ಯಾಟರಿ ಮತ್ತು ಪರ್ಫಾರ್ಮೆನ್ಸ್, ಒಂದು ಪ್ರಮುಖವಾದ ತಂತ್ರಜ್ಞಾನದ ಕ್ಷೇತ್ರವಾಗಿದೆ. ಬ್ಯಾಟರಿಗಳಲ್ಲಿನ ತಂತ್ರಜ್ಞಾನ ಸಂಕೀರ್ಣವಾಗಿದ್ದು, ಬ್ಯಾಟರಿ ಪರ್ಫಾರ್ಮೆನ್ಸ್ ಮತ್ತು ಸಂಬಂಧಿತ iPhone ಪರ್ಫಾರ್ಮೆನ್ಸ್‌ಗೆ ಹಲವಾರು ವೇರಿಯಬಲ್‌ಗಳು ಕೊಡುಗೆ ನೀಡುತ್ತವೆ. ಎಲ್ಲಾ ರೀಚಾರ್ಜ್ ಮಾಡಬಹುದಾದ ಬ್ಯಾಟರಿಗಳು ಬಳಸಬಹುದಾದ ಉತ್ಪನ್ನಗಳಾಗಿವೆ ಮತ್ತು ಸೀಮಿತ ಜೀವಿತಾವಧಿಯನ್ನು ಹೊಂದಿರುತ್ತವೆ—ಕಾಲಕ್ರಮೇಣ ಅವುಗಳ ಸಾಮರ್ಥ್ಯ ಮತ್ತು ಪರ್ಫಾರ್ಮೆನ್ಸ್ ಕ್ಷೀಣಿಸುವುದರಿಂದ ಅವುಗಳನ್ನು ಬದಲಾಯಿಸಬೇಕಾಗುತ್ತದೆ. iPhone ಬ್ಯಾಟರಿಗಳ ಕುರಿತು ಮತ್ತು ಬ್ಯಾಟರಿಗೆ ವಯಸ್ಸಾಗುವುದರಿಂದ iPhone ಪರ್ಫಾರ್ಮೆನ್ಸ್ ಹೇಗೆ ಪ್ರಭಾವಿತವಾಗುತ್ತದೆ ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ.
ಲಿಥಿಯಂ-ಐಯಾನ್ ಬ್ಯಾಟರಿಗಳ ಕುರಿತು
iPhone ಬ್ಯಾಟರಿಗಳು ಲಿಥಿಯಂ-ಐಯಾನ್ ತಂತ್ರಜ್ಞಾನವನ್ನು ಬಳಸುತ್ತವೆ. ಬ್ಯಾಟರಿ ತಂತ್ರಜ್ಞಾನದ ಹಳೆಯ ಜನರೇಶನ್‌ಗಳಿಗೆ ಹೋಲಿಸಿದರೆ, ಲಿಥಿಯಂ-ಐಯಾನ್ ಬ್ಯಾಟರಿಗಳು ವೇಗವಾಗಿ ಚಾರ್ಜ್ ಆಗುತ್ತವೆ, ಹೆಚ್ಚು ಕಾಲ ಬಾಳಿಕೆ ಬರುತ್ತವೆ ಮತ್ತು ಹಗುರವಾದ ಪ್ಯಾಕೇಜ್‌ನಲ್ಲಿ ಹೆಚ್ಚಿನ ಬ್ಯಾಟರಿ ಬಾಳಿಕೆ ಒದಗಿಸುವುದಕ್ಕಾಗಿ ಹೆಚ್ಚಿನ ಪವರ್ ಸಾಂದ್ರತೆಯನ್ನು ಹೊಂದಿರುತ್ತವೆ. ರೀಚಾರ್ಜ್ ಮಾಡಬಹುದಾದ ಲಿಥಿಯಂ-ಐಯಾನ್ ತಂತ್ರಜ್ಞಾನವು ಪ್ರಸ್ತುತ ನಿಮ್ಮ ಸಾಧನಕ್ಕೆ ಅತ್ಯುತ್ತಮ ತಂತ್ರಜ್ಞಾನವನ್ನು ಒದಗಿಸುತ್ತದೆ. ಲಿಥಿಯಂ-ಐಯಾನ್ ಬ್ಯಾಟರಿಗಳ ಕುರಿತು ಇನ್ನಷ್ಟು ತಿಳಿಯಿರಿ.
ಬ್ಯಾಟರಿ ಪರ್ಫಾರ್ಮೆನ್ಸ್ ಅನ್ನು ಗರಿಷ್ಠಗೊಳಿಸುವುದು ಹೇಗೆ
"ಬ್ಯಾಟರಿ ಬಾಳಿಕೆ" ಎಂದರೆ ಸಾಧನವನ್ನು ರೀಚಾರ್ಜ್ ಮಾಡುವ ಮೊದಲು ಅದು ಕಾರ್ಯನಿರ್ವಹಿಸುವ ಸಮಯವಾಗಿದೆ. "ಬ್ಯಾಟರಿ ಜೀವಿತಾವಧಿ" ಎಂದರೆ ಬ್ಯಾಟರಿಯನ್ನು ಬದಲಾಯಿಸುವ ಅವಶ್ಯಕತೆ ಉದ್ಭವಿಸುವವರೆಗೆ ಅದು ಬಾಳಿಕೆ ಬರುವ ಸಮಯವಾಗಿದೆ. ನಿಮ್ಮ ಸಾಧನವನ್ನು ನೀವು ಬಳಸುವ ವಿಧಾನವು ಬ್ಯಾಟರಿ ಬಾಳಿಕೆ ಮತ್ತು ಜೀವಿತಾವಧಿಯ ಮೇಲೆ ಪರಿಣಾಮ ಬೀರುತ್ತದೆ, ಆದರೆ ನಿಮ್ಮ ಸಾಧನವನ್ನು ನೀವು ಹೇಗೇ ಬಳಸಿದರೂ ಸಹ, ನಿಮಗೆ ಸಹಾಯ ಮಾಡಲು ಮಾರ್ಗಗಳಿವೆ. ಬ್ಯಾಟರಿಯ ಜೀವಿತಾವಧಿಯು ಅದರ "ರಾಸಾಯನಿಕ ವಯಸ್ಸಿಗೆ" ಸಂಬಂಧಿಸಿದ್ದು, ಇದಕ್ಕೆ ಕೇವಲ ಸಮಯದ ಕಳೆಯುವಿಕೆಗಿಂತ ಹೆಚ್ಚಿನ ಅರ್ಥವಿದೆ. ಇದು ಚಾರ್ಜ್ ಸೈಕಲ್‌ಗಳ ಸಂಖ್ಯೆ ಮತ್ತು ಅದರ ಕಾಳಜಿ ಹೇಗೆ ವಹಿಸಲಾಗಿದೆ ಎಂಬಂತಹ ವಿಭಿನ್ನ ಅಂಶಗಳನ್ನು ಒಳಗೊಂಡಿರುತ್ತದೆ.
ನಿಮ್ಮ iPhone ಅನ್ನು ದೀರ್ಘಾವಧಿಗೆ ಸಂಗ್ರಹಿಸಿಡುವಾಗ ಅದನ್ನು ಅರ್ಧದಷ್ಟು ಚಾರ್ಜ್ ಮಾಡಿ.
ನಿಮ್ಮ iPhone ಅನ್ನು ವಿಸ್ತೃತ ಸಮಯಾವಧಿಯವರೆಗೆ ಚಾರ್ಜ್ ಮಾಡುವುದನ್ನು ಮತ್ತು ನೇರವಾಗಿ ಬಿಸಿಲಿನ ಸಂಪರ್ಕಕ್ಕೆ ಬರುವುದೂ ಸೇರಿದಂತೆ ಅದನ್ನು ಬಿಸಿಯಾದ ವಾತಾವರಣದಲ್ಲಿ ಇರಿಸುವುದನ್ನು ತಪ್ಪಿಸಿ.
ಬ್ಯಾಟರಿಗಳಿಗೆ ರಾಸಾಯನಿಕವಾಗಿ ವಯಸ್ಸಾದಾಗ
ಎಲ್ಲಾ ರೀಚಾರ್ಜ್ ಮಾಡಬಹುದಾದ ಬ್ಯಾಟರಿಗಳು ಬಳಸಬಹುದಾದ ಕಾಂಪೋನೆಂಟ್‌ಗಳಾಗಿವೆ ಮತ್ತು ಅವುಗಳಿಗೆ ರಾಸಾಯನಿಕವಾಗಿ ವಯಸ್ಸಾಗುತ್ತಾ ಹೋದಂತೆ ಅವು ಕಡಿಮೆ ಪರಿಣಾಮಕಾರಿಯಾಗುತ್ತವೆ.
ಲಿಥಿಯಂ-ಐಯಾನ್ ಬ್ಯಾಟರಿಗಳಿಗೆ ರಾಸಾಯನಿಕವಾಗಿ ವಯಸ್ಸಾಗುತ್ತಾ ಹೋದಂತೆ, ಅವು ಉಳಿಸಿಕೊಳ್ಳಬಹುದಾದ ಚಾರ್ಜ್‌ನ ಪ್ರಮಾಣವು ಕಡಿಮೆಯಾಗುತ್ತದೆ, ಇದರ ಪರಿಣಾಮವಾಗಿ ಸ್ವಲ್ಪ ಸಮಯದ ಬಳಕೆಯ ನಂತರ ಸಾಧನವನ್ನು ರೀಚಾರ್ಜ್ ಮಾಡಬೇಕಾಗುತ್ತದೆ. ಇದನ್ನು ಬ್ಯಾಟರಿಯ ಗರಿಷ್ಠ ಸಾಮರ್ಥ್ಯವೆಂದು ಕರೆಯಬಹುದು—ಇದು ಬ್ಯಾಟರಿ ಹೊಸದಾಗಿದ್ದ ಸಮಯದ ಹೋಲಿಕೆಯಲ್ಲಿ ಬ್ಯಾಟರಿ ಸಾಮರ್ಥ್ಯದ ಮಾಪನವಾಗಿದೆ. ಹೆಚ್ಚುವರಿಯಾಗಿ, ಗರಿಷ್ಠ ತತ್‌ಕ್ಷಣದ ಪರ್ಫಾರ್ಮೆನ್ಸ್ ಅಥವಾ "ಗರಿಷ್ಠ ಪವರ್" ಅನ್ನು ಒದಗಿಸುವ ಬ್ಯಾಟರಿಯ ಸಾಮರ್ಥ್ಯವು ಕಡಿಮೆಯಾಗಬಹುದು. ಫೋನ್ ಸರಿಯಾಗಿ ಕಾರ್ಯನಿರ್ವಹಿಸಲು, ಬ್ಯಾಟರಿಯಿಂದ ತತ್‌ಕ್ಷಣದ ಪವರ್ ಅನ್ನು ಸೆಳೆದುಕೊಳ್ಳಲು ಎಲೆಕ್ಟ್ರಾನಿಕ್ಸ್‌ಗೆ ಸಾಧ್ಯವಾಗಬೇಕು. ಬ್ಯಾಟರಿಯ ಪ್ರತಿರೋಧವು ಈ ತತ್‌ಕ್ಷಣದ ಪವರ್ ಒದಗಿಸುವಿಕೆಯ ಮೇಲೆ ಪರಿಣಾಮ ಬೀರುವ ಒಂದು ಆ್ಯಟ್ರಿಬ್ಯೂಟ್ ಆಗಿದೆ. ಹೆಚ್ಚಿನ ಪ್ರತಿರೋಧವನ್ನು ಹೊಂದಿರುವ ಬ್ಯಾಟರಿಗೆ, ಅವಶ್ಯಕತೆ ಹೊಂದಿರುವ ಸಿಸ್ಟಂಗೆ ಸಾಕಷ್ಟು ಪವರ್ ಅನ್ನು ಒದಗಿಸಲು ಸಾಧ್ಯವಾಗದಿರಬಹುದು. ಬ್ಯಾಟರಿಯ ರಾಸಾಯನಿಕ ವಯಸ್ಸು ಹೆಚ್ಚಾಗಿದ್ದರೆ ಬ್ಯಾಟರಿಯ ಪ್ರತಿರೋಧವು ಹೆಚ್ಚಾಗಬಹುದು. ಚಾರ್ಜ್ ಕಡಿಮೆಯಿರುವ ಸ್ಥಿತಿಯಲ್ಲಿ ಮತ್ತು ತಂಪಾದ ತಾಪಮಾನವಿರುವ ವಾತಾವರಣದಲ್ಲಿ ಬ್ಯಾಟರಿಯ ಪ್ರತಿರೋಧವು ತಾತ್ಕಾಲಿಕವಾಗಿ ಹೆಚ್ಚಾಗುತ್ತದೆ. ಹೆಚ್ಚಿನ ರಾಸಾಯನಿಕ ವಯಸ್ಸಿನ ಜೊತೆಗೂಡಿದಾಗ, ಪ್ರತಿರೋಧದಲ್ಲಿನ ಹೆಚ್ಚಳವು ಹೆಚ್ಚು ಗಮನಾರ್ಹವಾಗಿರುತ್ತದೆ. ಇವು ಬ್ಯಾಟರಿ ರಸಾಯನಶಾಸ್ತ್ರದ ಗುಣಲಕ್ಷಣಗಳಾಗಿದ್ದು, ಇದು ಉದ್ಯಮದಲ್ಲಿನ ಎಲ್ಲಾ ಲಿಥಿಯಂ-ಐಯಾನ್ ಬ್ಯಾಟರಿಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಸಂಗತಿಯಾಗಿದೆ.
ಸಾಧನವು ಹೆಚ್ಚಿನ ಮಟ್ಟದ ಪ್ರತಿರೋಧವನ್ನು ಹೊಂದಿರುವ ಬ್ಯಾಟರಿಯಿಂದ ಶಕ್ತಿಯನ್ನು ಸೆಳೆದುಕೊಂಡಾಗ, ಬ್ಯಾಟರಿಯ ವೋಲ್ಟೇಜ್ ಹೆಚ್ಚಿನ ಪ್ರಮಾಣದಲ್ಲಿ ಇಳಿಕೆಯಾಗುತ್ತದೆ. ಎಲೆಕ್ಟ್ರಾನಿಕ್ ಕಾಂಪೋನೆಂಟ್‌ಗಳು ಸರಿಯಾಗಿ ಕಾರ್ಯನಿರ್ವಹಿಸಲು ಕನಿಷ್ಠ ವೋಲ್ಟೇಜ್ ಅಗತ್ಯವಿರುತ್ತದೆ. ಇದು ಸಾಧನದ ಆಂತರಿಕ ಸಂಗ್ರಹಣೆ, ಪವರ್ ಸರ್ಕ್ಯೂಟ್‌ಗಳು ಮತ್ತು ಬ್ಯಾಟರಿಯನ್ನು ಒಳಗೊಂಡಿದೆ. ಪವರ್ ನಿರ್ವಹಣಾ ಸಿಸ್ಟಂ ಈ ಪವರ್ ಅನ್ನು ಪೂರೈಸುವ ಬ್ಯಾಟರಿಯ ಸಾಮರ್ಥ್ಯವನ್ನು ನಿರ್ಧರಿಸುತ್ತದೆ ಮತ್ತು ಕಾರ್ಯಾಚರಣೆಗಳನ್ನು ನಿರ್ವಹಿಸಲು ಲೋಡ್‌ಗಳನ್ನು ನಿರ್ವಹಿಸುತ್ತದೆ. ಕಾರ್ಯಾಚರಣೆಗಳನ್ನು ಇನ್ನು ಮುಂದೆ ಪವರ್ ನಿರ್ವಹಣಾ ವ್ಯವಸ್ಥೆಯ ಸಂಪೂರ್ಣ ಸಾಮರ್ಥ್ಯಗಳೊಂದಿಗೆ ಬೆಂಬಲಿಸಲು ಸಾಧ್ಯವಾಗದಿದ್ದಾಗ, ಈ ಎಲೆಕ್ಟ್ರಾನಿಕ್ ಕಾಂಪೋನೆಂಟ್‌ಗಳನ್ನು ಸಂರಕ್ಷಿಸಲು ವ್ಯವಸ್ಥೆಯೇ ಸ್ಥಗಿತಗೊಳಿಸುತ್ತದೆ. ಈ ಸ್ಥಗಿತಗೊಳ್ಳುವಿಕೆಯು ಸಾಧನದ ದೃಷ್ಟಿಕೋನದಿಂದ ಉದ್ದೇಶಪೂರ್ವಕವಾಗಿದ್ದರೂ, ಇದು ಬಳಕೆದಾರರಿಗೆ ಅನಿರೀಕ್ಷಿತವಾಗಿರಬಹುದು.
ಅನಿರೀಕ್ಷಿತ ಸ್ಥಗಿತಗೊಳ್ಳುವಿಕೆಯನ್ನು ತಡೆಗಟ್ಟುವುದು
ನಿಮ್ಮ ಬ್ಯಾಟರಿಯು ಚಾರ್ಜ್ ಕಡಿಮೆಯಿರುವ ಸ್ಥಿತಿಯಲ್ಲಿರುವಾಗ, ರಾಸಾಯನಿಕವಾಗಿ ಹೆಚ್ಚು ವಯಸ್ಸಾಗಿರುವಾಗ ಅಥವಾ ನೀವು ತಂಪಾದ ತಾಪಮಾನದಲ್ಲಿದ್ದಾಗ ನೀವು ಅನಿರೀಕ್ಷಿತ ಸ್ಥಗಿತಗೊಳ್ಳುವಿಕೆಯನ್ನು ಅನುಭವಿಸುವ ಸಾಧ್ಯತೆಯಿದೆ. ವಿಪರೀತ ಸನ್ನಿವೇಶಗಳಲ್ಲಿ, ಸ್ಥಗಿತಗೊಳ್ಳುವಿಕೆಯು ಹೆಚ್ಚು ಸಾಮಾನ್ಯವಾಗಿ ಸಂಭವಿಸಬಹುದು, ಇದರಿಂದ ಸಾಧನವು ವಿಶ್ವಾಸಾರ್ಹವಲ್ಲದ ಅಥವಾ ಬಳಸಲಾಗದ ಸ್ಥಿತಿಯನ್ನು ತಲುಪುತ್ತದೆ. iPhone 6, iPhone 6 Plus, iPhone 6s, iPhone 6s Plus, iPhone SE (1 ನೇ ಜನರೇಶನ್), iPhone 7 ಮತ್ತು iPhone 7 Plus ಗಾಗಿ, ಸಾಧನವು ಅನಿರೀಕ್ಷಿತವಾಗಿ ಸ್ಥಗಿತಗೊಳ್ಳುವುದನ್ನು ತಡೆಯಲು iOS ಪರ್ಫಾರ್ಮೆನ್ಸ್‌ನ ಗರಿಷ್ಠ ಮಟ್ಟಗಳನ್ನು ಚಲನಶೀಲವಾಗಿ ನಿರ್ವಹಿಸುತ್ತದೆ, ಇದರಿಂದ ನೀವು ಆಗಲೂ ನಿಮ್ಮ iPhone ಅನ್ನು ಬಳಸಬಹುದು. ಈ ಪರ್ಫಾರ್ಮೆನ್ಸ್ ನಿರ್ವಹಣಾ ಫೀಚರ್, iPhone ಗೆ ನಿರ್ದಿಷ್ಟವಾಗಿದೆ ಮತ್ತು ಅದು ಇತರ ಯಾವುದೇ Apple ಉತ್ಪನ್ನಗಳಿಗೆ ಅನ್ವಯವಾಗುವುದಿಲ್ಲ. iOS 12.1 ನಿಂದ ಆರಂಭಿಸಿ, iPhone 8, iPhone 8 Plus ಮತ್ತು iPhone X ಈ ಫೀಚರ್ ಅನ್ನು ಒಳಗೊಂಡಿವೆ; iPhone XS, iPhone XS Max ಮತ್ತು iPhone XR, iOS 13.1 ನಿಂದ ಆರಂಭಿಸಿ ಈ ಫೀಚರ್ ಅನ್ನು ಒಳಗೊಂಡಿವೆ. iPhone 11 ಮತ್ತು ನಂತರದ ಮಾಡಲ್‌ಗಳಲ್ಲಿನ ಪರ್ಫಾರ್ಮೆನ್ಸ್ ನಿರ್ವಹಣೆಯ ಕುರಿತು ತಿಳಿಯಿರಿ.
ಸಾಧನದ ತಾಪಮಾನ, ಬ್ಯಾಟರಿ ಚಾರ್ಜ್‌ನ ಸ್ಥಿತಿ ಮತ್ತು ಬ್ಯಾಟರಿ ಪ್ರತಿರೋಧದ ಸಂಯೋಜನೆಯನ್ನು ಪರಿಗಣಿಸುವ ಮೂಲಕ iPhone ಪರ್ಫಾರ್ಮೆನ್ಸ್ ನಿರ್ವಹಣೆಯು ಕಾರ್ಯನಿರ್ವಹಿಸುತ್ತದೆ. ಅನಿರೀಕ್ಷಿತ ಸ್ಥಗಿತಗೊಳ್ಳುವಿಕೆಯನ್ನು ತಡೆಗಟ್ಟುವ ಸಲುವಾಗಿ ಈ ವೇರಿಯಬಲ್‌ಗಳಿಗೆ ಅಗತ್ಯವಿದ್ದರೆ ಮಾತ್ರ, CPU ಮತ್ತು GPU ನಂತಹ ಕೆಲವು ಸಿಸ್ಟಂ ಕಾಂಪೋನೆಂಟ್‌ಗಳ ಗರಿಷ್ಠ ಪರ್ಫಾರ್ಮೆನ್ಸ್ ಅನ್ನು iOS ಚಲನಶೀಲವಾಗಿ ನಿರ್ವಹಿಸುತ್ತದೆ. ಇದರ ಪರಿಣಾಮವಾಗಿ, ಸಾಧನದ ವರ್ಕ್‌ಲೋಡ್‌ಗಳು ಸ್ವಯಂ-ಸಮತೋಲನಗೊಳ್ಳುತ್ತವೆ, ಆ ಮೂಲಕ ಒಮ್ಮೆಗೇ ಪರ್ಫಾರ್ಮೆನ್ಸ್‌ನಲ್ಲಿನ ದೊಡ್ಡ ಮಟ್ಟದ, ತ್ವರಿತ ಹೆಚ್ಚಳಗಳನ್ನು ಉಂಟುಮಾಡುವ ಬದಲಿಗೆ, ಸಿಸ್ಟಂ ಕಾರ್ಯಗಳ ಸುಗಮವಾದ ಹಂಚಿಕೆಗೆ ಅನುವು ಮಾಡಿಕೊಡುತ್ತವೆ. ಕೆಲವು ಸಂದರ್ಭಗಳಲ್ಲಿ, ಸಾಧನದ ಪರ್ಫಾರ್ಮೆನ್ಸ್‌ನಲ್ಲಿ ಯಾವುದೇ ವ್ಯತ್ಯಾಸಗಳು ನಿಮ್ಮ ಗಮನಕ್ಕೆ ಬರದಿರಬಹುದು. ಗ್ರಹಿಸಲಾದ ಬದಲಾವಣೆಯ ಮಟ್ಟವು ನಿಮ್ಮ ಸಾಧನಕ್ಕೆ ಎಷ್ಟರ ಮಟ್ಟಿಗಿನ ಪರ್ಫಾರ್ಮೆನ್ಸ್ ನಿರ್ವಹಣೆಯ ಅಗತ್ಯವಿದೆ ಎಂಬುದನ್ನು ಆಧರಿಸಿರುತ್ತದೆ.
ಹೆಚ್ಚು ವಿಪರೀತವಾದ ಪರ್ಫಾರ್ಮೆನ್ಸ್ ನಿರ್ವಹಣೆಯ ಅಗತ್ಯವಿರುವ ಸಂದರ್ಭಗಳಲ್ಲಿ, ನೀವು ಈ ರೀತಿಯ ಪರಿಣಾಮಗಳನ್ನು ಗಮನಿಸಬಹುದು:
ದೀರ್ಘವಾದ ಆ್ಯಪ್ ಲಾಂಚ್ ಸಮಯ
ಸ್ಕ್ರಾಲ್ ಮಾಡುವಾಗ ಕಡಿಮೆ ಫ್ರೇಮ್ ರೇಟ್‌ಗಳು
ಬ್ಯಾಕ್‌ಲೈಟ್ ಮಬ್ಬಾಗುವಿಕೆ (ಇದನ್ನು ಕಂಟ್ರೋಲ್ ಸೆಂಟರ್‌ನಲ್ಲಿ ಅತಿಕ್ರಮಿಸಬಹುದು)
ಸ್ಪೀಕರ್ ವಾಲ್ಯೂಮ್ -3dB ವರೆಗೆ ಕಡಿಮೆಯಾಗುವಿಕೆ
ಕೆಲವು ಆ್ಯಪ್‌ಗಳಲ್ಲಿ ಫ್ರೇಮ್-ರೇಟ್ ಕ್ರಮೇಣವಾಗಿ ಕಡಿಮೆಯಾಗುವಿಕೆ
ಅತ್ಯಂತ ವಿಪರೀತ ಸನ್ನಿವೇಶಗಳಲ್ಲಿ, ಕ್ಯಾಮರಾ ಫ್ಲ್ಯಾಶ್, ಕ್ಯಾಮರಾ UI ನಲ್ಲಿ ಗೋಚರಿಸುವಂತೆ ನಿಷ್ಕ್ರಿಯವಾಗುತ್ತದೆ
ಹಿನ್ನೆಲೆಯಲ್ಲಿ ರಿಫ್ರೆಶ್ ಆಗುವ ಆ್ಯಪ್‌ಗಳನ್ನು ಲಾಂಚ್ ಮಾಡಿದ ನಂತರ ಪುನಃ ಲೋಡ್ ಮಾಡಬೇಕಾಗಬಹುದು
ಈ ಪರ್ಫಾರ್ಮೆನ್ಸ್ ನಿರ್ವಹಣೆ ಫೀಚರ್ ಅನೇಕ ಪ್ರಮುಖವಾದ ಕ್ಷೇತ್ರಗಳ ಮೇಲೆ ಪರಿಣಾಮ ಬೀರುವುದಿಲ್ಲ. ಇವುಗಳಲ್ಲಿ ಕೆಲವು ಕೆಳಕಂಡಂತಿವೆ:
ಮೊಬೈಲ್ ಕರೆಯ ಗುಣಮಟ್ಟ ಮತ್ತು ನೆಟ್‌ವರ್ಕಿಂಗ್ ಥ್ರೂಪುಟ್ ಪರ್ಫಾರ್ಮೆನ್ಸ್
ಕ್ಯಾಪ್ಚರ್ ಮಾಡಲಾದ ಫೋಟೋ ಮತ್ತು ವೀಡಿಯೊದ ಗುಣಮಟ್ಟ
GPS ಪರ್ಫಾರ್ಮೆನ್ಸ್
ಸ್ಥಳದ ನಿಖರತೆ
ಗೈರೋಸ್ಕೋಪ್, ಆ್ಯಕ್ಸೆಲೆರೊಮೀಟರ್, ಬ್ಯಾರೋಮೀಟರ್‌ನಂತಹ ಸೆನ್ಸರ್‌ಗಳು
Apple Pay
ಬ್ಯಾಟರಿ ಚಾರ್ಜ್ ಕಡಿಮೆಯಿರುವ ಸ್ಥಿತಿ ಮತ್ತು ತಂಪಾದ ತಾಪಮಾನಕ್ಕೆ ಸಂಬಂಧಿಸಿದಂತೆ, ಪರ್ಫಾರ್ಮೆನ್ಸ್-ನಿರ್ವಹಣಾ ಬದಲಾವಣೆಗಳು ತಾತ್ಕಾಲಿಕವಾಗಿರುತ್ತವೆ. ಸಾಧನದ ಬ್ಯಾಟರಿಗೆ ರಾಸಾಯನಿಕವಾಗಿ ಸಾಕಷ್ಟು ವಯಸ್ಸಾಗಿದ್ದರೆ, ಪರ್ಫಾರ್ಮೆನ್ಸ್ ನಿರ್ವಹಣೆಯ ಬದಲಾವಣೆಗಳು ಹೆಚ್ಚು ಕಾಲ ಬಾಳಬಹುದು. ಏಕೆಂದರೆ ಎಲ್ಲಾ ರೀಚಾರ್ಜ್ ಮಾಡಬಹುದಾದ ಬ್ಯಾಟರಿಗಳು ಬಳಕೆ ಮಾಡಬಹುದಾದ ಉತ್ಪನ್ನಗಳಾಗಿವೆ ಮತ್ತು ಸೀಮಿತ ಜೀವಿತಾವಧಿಯನ್ನು ಹೊಂದಿರುತ್ತವೆ, ಕಾಲಕ್ರಮೇಣ ಅವುಗಳನ್ನು ಬದಲಾಯಿಸಬೇಕಾಗುತ್ತದೆ. ನೀವು ಇದರಿಂದ ಪ್ರಭಾವಿತರಾಗಿದ್ದರೆ ಮತ್ತು ನಿಮ್ಮ ಸಾಧನದ ಪರ್ಫಾರ್ಮೆನ್ಸ್ ಅನ್ನು ಸುಧಾರಿಸಲು ಬಯಸಿದರೆ, ನಿಮ್ಮ ಸಾಧನದ ಬ್ಯಾಟರಿಯನ್ನು ಬದಲಾಯಿಸುವುದರಿಂದ ಸಹಾಯವಾಗಬಹುದು.
iOS 11.3 ಮತ್ತು ನಂತರದ ಆವೃತ್ತಿಗಳಿಗಾಗಿ
iOS 11.3 ಮತ್ತು ನಂತರದ ಆವೃತ್ತಿಗಳು ಅನಿರೀಕ್ಷಿತ ಸ್ಥಗಿತಗೊಳ್ಳುವಿಕೆಯನ್ನು ತಪ್ಪಿಸಲು ಅವಶ್ಯಕವಾದ ಪರ್ಫಾರ್ಮೆನ್ಸ್ ನಿರ್ವಹಣೆಯ ಮಟ್ಟವನ್ನು ಕಾಲಕಾಲಕ್ಕೆ ಮೌಲ್ಯಮಾಪನಕ್ಕೆ ಒಳಪಡಿಸುವ ಮೂಲಕ ಪರ್ಫಾರ್ಮೆನ್ಸ್ ನಿರ್ವಹಣೆಯನ್ನು ಸುಧಾರಿಸುತ್ತವೆ. ಗಮನಿಸಲಾದ ಗರಿಷ್ಠ ಪವರ್ ಅವಶ್ಯಕತೆಗಳನ್ನು ಬೆಂಬಲಿಸಲು ಬ್ಯಾಟರಿಯ ಆರೋಗ್ಯಕ್ಕೆ ಸಾಧ್ಯವಾದರೆ, ಪರ್ಫಾರ್ಮೆನ್ಸ್ ನಿರ್ವಹಣೆಯ ಪ್ರಮಾಣವನ್ನು ಕಡಿಮೆ ಮಾಡಲಾಗುತ್ತದೆ. ಮತ್ತೊಮ್ಮೆ ಅನಿರೀಕ್ಷಿತವಾಗಿ ಸ್ಥಗಿತಗೊಂಡರೆ, ಪರ್ಫಾರ್ಮೆನ್ಸ್ ನಿರ್ವಹಣೆ ಹೆಚ್ಚಾಗುತ್ತದೆ. ಈ ಮೌಲ್ಯಮಾಪನವು ನಿರಂತರವಾಗಿ ನಡೆಯುತ್ತಿರುತ್ತದೆ, ಆ ಮೂಲಕ ಹೆಚ್ಚು ಹೊಂದಾಣಿಕೆಯಾಗುವ ಪರ್ಫಾರ್ಮೆನ್ಸ್ ನಿರ್ವಹಣೆಗೆ ಅನುವು ಮಾಡಿಕೊಡುತ್ತದೆ.
ಒಟ್ಟಾರೆ ಸಿಸ್ಟಮ್ ಪರ್ಫಾರ್ಮೆನ್ಸ್ ಅನ್ನು ಗರಿಷ್ಠಗೊಳಿಸಲು, iPhone 8 ಮತ್ತು ನಂತರದ ಆವೃತ್ತಿಗಳು ಸುಧಾರಿತ ಹಾರ್ಡ್‌ವೇರ್ ಮತ್ತು ಸಾಫ್ಟ್‌ವೇರ್ ವಿನ್ಯಾಸವನ್ನು ಬಳಸುತ್ತವೆ, ಅದು ಪವರ್ ಅವಶ್ಯಕತೆಗಳು ಮತ್ತು ಬ್ಯಾಟರಿಯ ಪವರ್ ಸಾಮರ್ಥ್ಯ, ಇವೆರಡರ ಕುರಿತು ಹೆಚ್ಚು ನಿಖರವಾದ ಅಂದಾಜನ್ನು ಒದಗಿಸುತ್ತದೆ. ಇದು ಅನಿರೀಕ್ಷಿತ ಸ್ಥಗಿತಗೊಳ್ಳುವಿಕೆಯನ್ನು ಹೆಚ್ಚು ನಿಖರವಾಗಿ ನಿರೀಕ್ಷಿಸಲು ಮತ್ತು ತಪ್ಪಿಸಲು iOS ಗೆ ಅನುವು ಮಾಡಿಕೊಡುತ್ತದೆ. ಇದರ ಪರಿಣಾಮವಾಗಿ, ಪರ್ಫಾರ್ಮೆನ್ಸ್ ನಿರ್ವಹಣೆಯ ಪರಿಣಾಮಗಳು iPhone 8 ಮತ್ತು ನಂತರ ಮಾಡಲ್‌ಗಳಲ್ಲಿ ಹೆಚ್ಚು ಗಮನಕ್ಕೆ ಬರದಿರಬಹುದು. ಕಾಲಾನಂತರದಲ್ಲಿ, ಎಲ್ಲಾ iPhone ಮಾಡಲ್‌ಗಳಲ್ಲಿನ ರೀಚಾರ್ಜ್ ಮಾಡಬಹುದಾದ ಬ್ಯಾಟರಿಗಳ ಸಾಮರ್ಥ್ಯ ಮತ್ತು ಗರಿಷ್ಠ ಪರ್ಫಾರ್ಮೆನ್ಸ್ ಕಡಿಮೆಯಾಗುತ್ತವೆ ಮತ್ತು ಕಾಲಕ್ರಮೇಣ ಅವುಗಳನ್ನು ಬದಲಾಯಿಸಬೇಕಾಗುತ್ತದೆ.
ಬ್ಯಾಟರಿ ಆರೋಗ್ಯ
iPhone 6 ಮತ್ತು ನಂತರ ಆವೃತ್ತಿಗಳೊಂದಿಗೆ, iOS ಬ್ಯಾಟರಿ ಆರೋಗ್ಯವನ್ನು ತೋರಿಸಲು ಹೊಸ ಫೀಚರ್‌ಗಳನ್ನು ಸೇರಿಸುತ್ತದೆ ಮತ್ತು ನೀವು ಬ್ಯಾಟರಿಯನ್ನು ಬದಲಾಯಿಸಬೇಕೇ ಎಂಬುದನ್ನು ಶಿಫಾರಸು ಮಾಡುತ್ತದೆ. ನೀವು ಇವುಗಳನ್ನು ಸೆಟ್ಟಿಂಗ್ಸ್ > ಬ್ಯಾಟರಿ > ಬ್ಯಾಟರಿ ಆರೋಗ್ಯ ಮತ್ತು ಚಾರ್ಜಿಂಗ್ ಎಂಬಲ್ಲಿ ಕಾಣಬಹುದು (iOS 16.0 ಅಥವಾ ಅದಕ್ಕಿಂತ ಹಿಂದಿನ ಆವೃತ್ತಿಗಳೊಂದಿಗೆ, ಇವುಗಳನ್ನು ಸೆಟ್ಟಿಂಗ್ಸ್ > ಬ್ಯಾಟರಿ > ಬ್ಯಾಟರಿ ಆರೋಗ್ಯ ಎಂಬಲ್ಲಿ ಕಾಣಿರಿ).
ಹೆಚ್ಚುವರಿಯಾಗಿ, ಅನಿರೀಕ್ಷಿತ ಸ್ಥಗಿತಗೊಳ್ಳುವಿಕೆಯನ್ನು ತಡೆಗಟ್ಟಲು ಗರಿಷ್ಠ ಪರ್ಫಾರ್ಮೆನ್ಸ್ ಅನ್ನು ಚಲನಶೀಲವಾಗಿ ನಿರ್ವಹಿಸುವ ಪರ್ಫಾರ್ಮೆನ್ಸ್-ನಿರ್ವಹಣಾ ಫೀಚರ್ ಆನ್ ಆಗಿದೆಯೇ ಎಂದು ನೀವು ನೋಡಬಹುದು ಮತ್ತು ನೀವು ಅದನ್ನು ಆಫ್ ಮಾಡಲು ಆಯ್ಕೆಮಾಡಬಹುದು. ಗರಿಷ್ಠ ತತ್‌ಕ್ಷಣದ ಪವರ್ ಅನ್ನು ಒದಗಿಸುವ ಸಾಮರ್ಥ್ಯ ಕಡಿಮೆಯಾಗಿರುವ ಬ್ಯಾಟರಿಯನ್ನು ಹೊಂದಿರುವ ಸಾಧನವು ಅನಿರೀಕ್ಷಿತವಾಗಿ ಸ್ಥಗಿತಗೊಂಡ ನಂತರ ಮಾತ್ರ ಈ ಫೀಚರ್ ಅನ್ನು ಸಕ್ರಿಯಗೊಳಿಸಲಾಗುತ್ತದೆ. ಈ ಫೀಚರ್ iPhone 6, iPhone 6 Plus, iPhone 6s, iPhone 6s Plus, iPhone SE (1 ನೇ ಜನರೇಶನ್), iPhone 7 ಮತ್ತು iPhone 7 Plus ಗೆ ಅನ್ವಯವಾಗುತ್ತದೆ. iOS 12.1 ನಿಂದ ಆರಂಭಿಸಿ, iPhone 8, iPhone 8 Plus ಮತ್ತು iPhone X ಈ ಫೀಚರ್ ಅನ್ನು ಒಳಗೊಂಡಿವೆ; iPhone XS, iPhone XS Max ಮತ್ತು iPhone XR, iOS 13.1 ನಿಂದ ಆರಂಭಿಸಿ ಈ ಫೀಚರ್ ಅನ್ನು ಒಳಗೊಂಡಿವೆ. iPhone 11 ಮತ್ತು ನಂತರದ ಮಾಡಲ್‌ಗಳಲ್ಲಿನ ಪರ್ಫಾರ್ಮೆನ್ಸ್ ನಿರ್ವಹಣೆಯ ಕುರಿತು ತಿಳಿಯಿರಿ. ಪರ್ಫಾರ್ಮೆನ್ಸ್ ನಿರ್ವಹಣೆಯು ಈ ಹೊಸ ಮಾಡಲ್‌ಗಳ ಮೇಲೆ ಬೀರುವ ಪರಿಣಾಮಗಳು ಅವುಗಳ ಹೆಚ್ಚು ಸುಧಾರಿತ ಹಾರ್ಡ್‌ವೇರ್ ಮತ್ತು ಸಾಫ್ಟ್‌ವೇರ್ ವಿನ್ಯಾಸದಿಂದಾಗಿ ಹೆಚ್ಚು ಗಮನಕ್ಕೆ ಬರದಿರಬಹುದು.
iOS 11.2.6 ಅಥವಾ ಅದಕ್ಕಿಂತ ಹಿಂದಿನ ಆವೃತ್ತಿಗಳಿಂದ ಅಪ್‌ಡೇಟ್ ಆಗುವ ಸಾಧನಗಳಲ್ಲಿ ಆರಂಭದಲ್ಲಿ ಪರ್ಫಾರ್ಮೆನ್ಸ್ ನಿರ್ವಹಣೆಯನ್ನು ನಿಷ್ಕ್ರಿಯಗೊಳಿಸಲಾಗಿರುತ್ತದೆ; ಸಾಧನವು ತರುವಾಯ ಅನಿರೀಕ್ಷಿತವಾಗಿ ಸ್ಥಗಿತಗೊಂಡರೆ ಅದನ್ನು ಪುನಃ ಸಕ್ರಿಯಗೊಳಿಸಲಾಗುತ್ತದೆ.
ಬ್ಯಾಟರಿ ಮತ್ತು ಒಟ್ಟಾರೆ ಸಿಸ್ಟಂ ವಿನ್ಯಾಸಗೊಳಿಸಿದಂತೆ ಕಾರ್ಯನಿರ್ವಹಿಸುವುದನ್ನು ಮತ್ತು ಆಂತರಿಕ ಕಾಂಪೋನೆಂಟ್‌ಗಳು ಸುರಕ್ಷಿತವಾಗಿರುವುದನ್ನು ಖಚಿತಪಡಿಸಿಕೊಳ್ಳಲು, ಎಲ್ಲಾ iPhone ಮಾಡಲ್‌ಗಳು ಮೂಲಭೂತ ಪರ್ಫಾರ್ಮೆನ್ಸ್ ನಿರ್ವಹಣೆಯನ್ನು ಒಳಗೊಂಡಿರುತ್ತವೆ. ಇದು ಬಿಸಿ ಅಥವಾ ತಂಪಾದ ತಾಪಮಾನದಲ್ಲಿನ ನಡವಳಿಕೆ ಹಾಗೂ ಆಂತರಿಕ ವೋಲ್ಟೇಜ್ ನಿರ್ವಹಣೆಯನ್ನು ಒಳಗೊಂಡಿದೆ. ಸುರಕ್ಷತೆ ಮತ್ತು ನಿರೀಕ್ಷಿತ ಕಾರ್ಯಕ್ಕಾಗಿ ಈ ರೀತಿಯ ಪರ್ಫಾರ್ಮೆನ್ಸ್ ನಿರ್ವಹಣೆಯ ಅಗತ್ಯವಿದ್ದು, ಅದನ್ನು ಆಫ್ ಮಾಡಲು ಸಾಧ್ಯವಿಲ್ಲ.

ನಿಮ್ಮ ಬ್ಯಾಟರಿಯ ಗರಿಷ್ಠ ಸಾಮರ್ಥ್ಯ
ಬ್ಯಾಟರಿ ಆರೋಗ್ಯ ಸ್ಕ್ರೀನ್ ಗರಿಷ್ಠ ಬ್ಯಾಟರಿ ಸಾಮರ್ಥ್ಯ ಮತ್ತು ಗರಿಷ್ಠ ಪರ್ಫಾರ್ಮೆನ್ಸ್ ಸಾಮರ್ಥ್ಯದ ಮಾಹಿತಿಯನ್ನು ಒಳಗೊಂಡಿದೆ.
ಗರಿಷ್ಠ ಬ್ಯಾಟರಿ ಸಾಮರ್ಥ್ಯವು, ಸಾಧನದ ಬ್ಯಾಟರಿಯು ಹೊಸದಾಗಿದ್ದ ಸಮಯದ ಹೋಲಿಕೆಯಲ್ಲಿ ಅದರ ಸಾಮರ್ಥ್ಯವನ್ನು ಮಾಪನ ಮಾಡುತ್ತದೆ. ಬ್ಯಾಟರಿಗೆ ರಾಸಾಯನಿಕವಾಗಿ ವಯಸ್ಸಾದಂತೆ ಬ್ಯಾಟರಿಯು ಕಡಿಮೆ ಸಾಮರ್ಥ್ಯವನ್ನು ಹೊಂದಿರುತ್ತದೆ, ಇದರಿಂದ ಕಡಿಮೆ ಸಮಯ ಬಳಸಿದ ನಂತರ ಚಾರ್ಜ್ ಮಾಡಬೇಕಾಗಬಹುದು. iPhone ಅನ್ನು ತಯಾರಿಸಿದ ಮತ್ತು ಅದನ್ನು ಸಕ್ರಿಯಗೊಳಿಸಿದ ಸಮಯದ ನಡುವಿನ ಅವಧಿಯನ್ನು ಆಧರಿಸಿ, ನಿಮ್ಮ ಬ್ಯಾಟರಿ ಸಾಮರ್ಥ್ಯವು ಶೇಕಡಾ 100 ಕ್ಕಿಂತ ಸ್ವಲ್ಪ ಕಡಿಮೆ ಮೌಲ್ಯವನ್ನು ತೋರಿಸಬಹುದು.
iPhone 14 ಮತ್ತು ಅದರ ಹಿಂದಿನ ಮಾಡಲ್‌ಗಳ ಬ್ಯಾಟರಿಗಳನ್ನು, ಆದರ್ಶ ಪರಿಸ್ಥಿತಿಗಳಲ್ಲಿ 500 ಸಂಪೂರ್ಣ ಚಾರ್ಜ್ ಸೈಕಲ್‌ಗಳಲ್ಲಿ ತಮ್ಮ ಮೂಲ ಸಾಮರ್ಥ್ಯದ ಶೇಕಡಾ 80 ರಷ್ಟನ್ನು ಉಳಿಸಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ.1 iPhone 15 ಮಾಡಲ್‌ಗಳ ಬ್ಯಾಟರಿಗಳನ್ನು, ಆದರ್ಶ ಪರಿಸ್ಥಿತಿಗಳಲ್ಲಿ 1000 ಸಂಪೂರ್ಣ ಚಾರ್ಜ್ ಸೈಕಲ್‌ಗಳಲ್ಲಿ ತಮ್ಮ ಮೂಲ ಸಾಮರ್ಥ್ಯದ ಶೇಕಡಾ 80 ರಷ್ಟನ್ನು ಉಳಿಸಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ.1ಎಲ್ಲಾ ಮಾಡಲ್‌ಗಳಲ್ಲಿ, ನಿಖರವಾದ ಸಾಮರ್ಥ್ಯದ ಶೇಕಡಾವಾರು ಪ್ರಮಾಣವು ಸಾಧನಗಳನ್ನು ನಿಯಮಿತವಾಗಿ ಹೇಗೆ ಬಳಸಲಾಗುತ್ತದೆ ಮತ್ತು ಚಾರ್ಜ್ ಮಾಡಲಾಗುತ್ತದೆ ಎಂಬುದನ್ನು ಆಧರಿಸಿರುತ್ತದೆ. ಒಂದು ವರ್ಷದ ವಾರಂಟಿ (ತುರ್ಕಿಯೆದಲ್ಲಿ ಎರಡು ವರ್ಷಗಳ ವಾರಂಟಿ) ಸ್ಥಳೀಯ ಗ್ರಾಹಕ ಕಾನೂನುಗಳ ಅಡಿಯಲ್ಲಿ ಒದಗಿಸಲಾದ ಹಕ್ಕುಗಳ ಜೊತೆಗೆ ದೋಷಯುಕ್ತ ಬ್ಯಾಟರಿಗೆ ಸೇವಾ ರಕ್ಷಣೆಯನ್ನು ಒಳಗೊಂಡಿದೆ. ಅದರ ವಾರಂಟಿ ಅವಧಿ ಮೀರಿದ್ದರೆ, Apple ಶುಲ್ಕಕ್ಕೆ ಪ್ರತಿಯಾಗಿ ಸರ್ವಿಸ್ ಒದಗಿಸುತ್ತದೆ. ಚಾರ್ಜ್ ಸೈಕಲ್‌ಗಳ ಕುರಿತು ಇನ್ನಷ್ಟು ತಿಳಿಯಿರಿ.
ನಿಮ್ಮ ಬ್ಯಾಟರಿಯ ಆರೋಗ್ಯ ಕ್ಷೀಣಿಸಿದಂತೆ, ಗರಿಷ್ಠ ಪರ್ಫಾರ್ಮೆನ್ಸ್ ಅನ್ನು ನೀಡುವ ಅದರ ಸಾಮರ್ಥ್ಯವೂ ಕ್ಷೀಣಿಸುತ್ತದೆ. ಬ್ಯಾಟರಿ ಆರೋಗ್ಯದ ಸ್ಕ್ರೀನ್ ಗರಿಷ್ಠ ಪರ್ಫಾರ್ಮೆನ್ಸ್ ಸಾಮರ್ಥ್ಯದ ವಿಭಾಗವನ್ನು ಒಳಗೊಂಡಿದ್ದು, ಅಲ್ಲಿ ಈ ಕೆಳಗಿನ ಸಂದೇಶಗಳು ಕಾಣಿಸಿಕೊಳ್ಳಬಹುದು.
ಪರ್ಫಾರ್ಮೆನ್ಸ್ ಸಾಮಾನ್ಯವಾಗಿದೆ
ಬ್ಯಾಟರಿಯ ಪರಿಸ್ಥಿತಿಗೆ ಸಾಮಾನ್ಯ ಗರಿಷ್ಠ ಪರ್ಫಾರ್ಮೆನ್ಸ್ ಅನ್ನು ಬೆಂಬಲಿಸಲು ಸಾಧ್ಯವಿರುವಾಗ ಮತ್ತು ಪರ್ಫಾರ್ಮೆನ್ಸ್ ನಿರ್ವಹಣೆಯ ಫೀಚರ್‌ಗಳನ್ನು ಅನ್ವಯಿಸದಿರುವಾಗ, ನಿಮಗೆ ಈ ಸಂದೇಶ ಕಾಣಿಸುತ್ತದೆ:
ನಿಮ್ಮ ಬ್ಯಾಟರಿ ಪ್ರಸ್ತುತ ಸಾಮಾನ್ಯ ಗರಿಷ್ಠ ಪರ್ಫಾರ್ಮೆನ್ಸ್ ಅನ್ನು ಬೆಂಬಲಿಸುತ್ತಿದೆ.

ಪರ್ಫಾರ್ಮೆನ್ಸ್ ನಿರ್ವಹಣೆಯನ್ನು ಅನ್ವಯಿಸಲಾಗಿದೆ
ಪರ್ಫಾರ್ಮೆನ್ಸ್ ನಿರ್ವಹಣೆ ಫೀಚರ್‌ಗಳನ್ನು ಅನ್ವಯಿಸಿದಾಗ, ನಿಮಗೆ ಈ ಸಂದೇಶ ಕಾಣಿಸುತ್ತದೆ:
ಅವಶ್ಯಕ ಗರಿಷ್ಠ ಪವರ್ ಅನ್ನು ಒದಗಿಸಲು ಬ್ಯಾಟರಿಗೆ ಸಾಧ್ಯವಾಗದ ಕಾರಣ ಈ iPhone ಅನಿರೀಕ್ಷಿತವಾಗಿ ಸ್ಥಗಿತಗೊಂಡಿದೆ. ಇದು ಮತ್ತೊಮ್ಮೆ ನಡೆಯದಂತೆ ತಡೆಯಲು ನೆರವಾಗಲು ಪರ್ಫಾರ್ಮೆನ್ಸ್ ನಿರ್ವಹಣೆಯನ್ನು ಅನ್ವಯಿಸಲಾಗಿದೆ. ನಿಷ್ಕ್ರಿಯಗೊಳಿಸಿ...
ನೀವು ಪರ್ಫಾರ್ಮೆನ್ಸ್ ನಿರ್ವಹಣೆಯನ್ನು ನಿಷ್ಕ್ರಿಯಗೊಳಿಸಿದರೆ, ನಿಮಗೆ ಅದನ್ನು ಮತ್ತೊಮ್ಮೆ ಆನ್ ಮಾಡಲು ಸಾಧ್ಯವಾಗುವುದಿಲ್ಲ ಎಂಬುದನ್ನು ಗಮನಿಸಿ. ಅದು ಅನಿರೀಕ್ಷಿತವಾಗಿ ಸ್ಥಗಿತಗೊಂಡರೆ ಅದನ್ನು ಸ್ವಯಂಚಾಲಿತವಾಗಿ ಮತ್ತೊಮ್ಮೆ ಆನ್ ಮಾಡಲಾಗುತ್ತದೆ. ನಿಷ್ಕ್ರಿಯಗೊಳಿಸುವ ಆಯ್ಕೆಯೂ ಲಭ್ಯವಿರುತ್ತದೆ.

ಪರ್ಫಾರ್ಮೆನ್ಸ್ ನಿರ್ವಹಣೆಯನ್ನು ಆಫ್ ಮಾಡಲಾಗಿದೆ
ಅನ್ವಯಿಸಲಾಗಿರುವ ಪರ್ಫಾರ್ಮೆನ್ಸ್ ಫೀಚರ್ ಅನ್ನು ನೀವು ನಿಷ್ಕ್ರಿಯಗೊಳಿಸಿದರೆ, ನಿಮಗೆ ಈ ಸಂದೇಶ ಕಾಣಿಸುತ್ತದೆ:
ಅವಶ್ಯಕವಾದ ಗರಿಷ್ಠ ಪವರ್ ಅನ್ನು ಒದಗಿಸಲು ಬ್ಯಾಟರಿಗೆ ಸಾಧ್ಯವಾಗದ ಕಾರಣ ಈ iPhone ಅನಿರೀಕ್ಷಿತವಾಗಿ ಸ್ಥಗಿತಗೊಂಡಿದೆ. ನೀವು ಪರ್ಫಾರ್ಮೆನ್ಸ್ ನಿರ್ವಹಣೆ ರಕ್ಷಣೆಗಳನ್ನು ಹಸ್ತಚಾಲಿತವಾಗಿ ನಿಷ್ಕ್ರಿಯಗೊಳಿಸಿದ್ದೀರಿ.
ಸಾಧನವು ಮತ್ತೊಮ್ಮೆ ಅನಿರೀಕ್ಷಿತವಾಗಿ ಸ್ಥಗಿತಗೊಂಡರೆ, ಪರ್ಫಾರ್ಮೆನ್ಸ್-ನಿರ್ವಹಣೆಯ ಫೀಚರ್‌ಗಳನ್ನು ಪುನಃ ಅನ್ವಯಿಸಲಾಗುತ್ತದೆ. ನಿಷ್ಕ್ರಿಯಗೊಳಿಸುವ ಆಯ್ಕೆಯೂ ಲಭ್ಯವಿರುತ್ತದೆ.

ಬ್ಯಾಟರಿ ಆರೋಗ್ಯ ಕ್ಷೀಣಿಸಿದೆ
ಬ್ಯಾಟರಿ ಆರೋಗ್ಯವು ಗಮನಾರ್ಹವಾಗಿ ಕ್ಷೀಣಿಸಿದ್ದರೆ, ಈ ಕೆಳಗಿನ ಸಂದೇಶ ಸಹ ಕಾಣಿಸಿಕೊಳ್ಳುತ್ತದೆ:
ನಿಮ್ಮ ಬ್ಯಾಟರಿಯ ಆರೋಗ್ಯವು ಗಣನೀಯವಾಗಿ ಕ್ಷೀಣಿಸಿದೆ. Apple ನ ಅಧಿಕೃತ ಸೇವಾ ಪೂರೈಕೆದಾರರು ಸಂಪೂರ್ಣ ಪರ್ಫಾರ್ಮೆನ್ಸ್ ಮತ್ತು ಸಾಮರ್ಥ್ಯವನ್ನು ಮರುಸ್ಥಾಪಿಸಲು ಬ್ಯಾಟರಿಯನ್ನು ಬದಲಾಯಿಸಬಲ್ಲರು. ಸೇವಾ ಆಯ್ಕೆಗಳ ಕುರಿತು ಇನ್ನಷ್ಟು...
ಈ ಸಂದೇಶವು ಸುರಕ್ಷತಾ ಸಮಸ್ಯೆಯನ್ನು ಸೂಚಿಸುವುದಿಲ್ಲ. ನೀವು ಈಗಲೂ ನಿಮ್ಮ ಬ್ಯಾಟರಿಯನ್ನು ಬಳಸಬಹುದು. ಆದಾಗ್ಯೂ, ಹೆಚ್ಚು ಗಮನಾರ್ಹವಾದ ಬ್ಯಾಟರಿ ಮತ್ತು ಪರ್ಫಾರ್ಮೆನ್ಸ್ ಸಮಸ್ಯೆಗಳು ನಿಮ್ಮ ಅನುಭವಕ್ಕೆ ಬರಬಹುದು. ಹೊಸ ಬದಲಿ ಬ್ಯಾಟರಿಯೊಂದಿಗೆ ನಿಮ್ಮ ಅನುಭವವನ್ನು ಸುಧಾರಿಸಲು, ಸರ್ವಿಸ್ ಪಡೆಯಿರಿ.

ಪರಿಶೀಲಿಸಲು ಸಾಧ್ಯವಾಗುತ್ತಿಲ್ಲ
ನಿಮಗೆ ಕೆಳಗಿನ ಸಂದೇಶ ಕಾಣಿಸಿದರೆ, ನಿಮ್ಮ iPhone ನಲ್ಲಿನ ಬ್ಯಾಟರಿಯನ್ನುಪರಿಶೀಲಿಸಲು ಸಾಧ್ಯವಾಗುತ್ತಿಲ್ಲ ಎಂದರ್ಥ. ಈ ಸಂದೇಶವು iPhone XS, iPhone XS Max, iPhone XR ಮತ್ತು ನಂತರದ ಮಾಡಲ್‌ಗಳಿಗೆ ಅನ್ವಯವಾಗುತ್ತದೆ.2
ಈ iPhone ನೈಜವಾದ Apple ಬ್ಯಾಟರಿಯನ್ನು ಹೊಂದಿದೆಯೇ ಎಂದು ಪರಿಶೀಲಿಸಲು ಸಾಧ್ಯವಾಗುತ್ತಿಲ್ಲ. ಈ ಬ್ಯಾಟರಿಯಲ್ಲಿನ ವಿವರಗಳು ನಿಖರವಾಗಿಲ್ಲದಿರಬಹುದು. ಇನ್ನಷ್ಟು ತಿಳಿಯಿರಿ...
ಈ ಸ್ಕ್ರೀನ್‌ನಲ್ಲಿನ ಬ್ಯಾಟರಿ ಆರೋಗ್ಯದ ಮಾಹಿತಿಯು ನಿಖರವಾಗಿರದೇ ಇರಬಹುದು. ನಿಮ್ಮ ಬ್ಯಾಟರಿಯನ್ನು ಪರೀಕ್ಷಿಸಲು, ಸರ್ವಿಸ್ ಅನ್ನು ಪಡೆಯಿರಿ.

iPhone 11, iPhone 11 Pro ಮತ್ತು iPhone 11 Pro Max ನಲ್ಲಿ ಬ್ಯಾಟರಿ ಆರೋಗ್ಯ ವರದಿ ಮಾಡುವಿಕೆಯ ರೀಕ್ಯಾಲಿಬ್ರೇಶನ್
iOS 14.5 ಮತ್ತು ನಂತರದ ಆವೃತ್ತಿಗಳು ಕೆಲವು ಬಳಕೆದಾರರಿಗಾಗಿ ಬ್ಯಾಟರಿ ಆರೋಗ್ಯ ವರದಿ ಮಾಡುವಿಕೆಯ ತಪ್ಪಾದ ಅಂದಾಜುಗಳನ್ನು ಬಗೆಹರಿಸುವುದಕ್ಕಾಗಿ ಅಪ್‌ಡೇಟ್ ಒಂದನ್ನು ಒಳಗೊಂಡಿರುತ್ತವೆ. ಬ್ಯಾಟರಿ ಆರೋಗ್ಯ ವರದಿ ಮಾಡುವಿಕೆ ಸಿಸ್ಟಂ, iPhone 11, iPhone 11 Pro ಮತ್ತು iPhone 11 Pro Max ನಲ್ಲಿ ಗರಿಷ್ಠ ಬ್ಯಾಟರಿ ಸಾಮರ್ಥ್ಯ ಮತ್ತು ಗರಿಷ್ಠ ಪರ್ಫಾರ್ಮೆನ್ಸ್ ಸಾಮರ್ಥ್ಯವನ್ನು ರೀಕ್ಯಾಲಿಬ್ರೇಟ್ ಮಾಡುತ್ತದೆ.
iOS 14.5 ನಲ್ಲಿ ಬ್ಯಾಟರಿ ಆರೋಗ್ಯ ವರದಿ ಮಾಡುವಿಕೆಯ ರೀಕ್ಯಾಲಿಬ್ರೇಶನ್‌ನ ಕುರಿತು ಇನ್ನಷ್ಟು ತಿಳಿಯಿರಿ
ಬ್ಯಾಟರಿ ಸರ್ವಿಸ್ ಮತ್ತು ಮರುಬಳಕೆಯ ಕುರಿತು ತಿಳಿಯಿರಿ
ನಿಮ್ಮ iPhone ಅನ್ನು ನೀವು ಬಳಸಿದಾಗ, ಅದರ ಬ್ಯಾಟರಿಯು ಚಾರ್ಜ್ ಸೈಕಲ್‌ಗಳಿಗೆ ಒಳಪಡುತ್ತದೆ. ನಿಮ್ಮ ಬ್ಯಾಟರಿಯ ಸಾಮರ್ಥ್ಯದ ಶೇಕಡಾ 100 ರಷ್ಟನ್ನು ಪ್ರತಿನಿಧಿಸುವ ಪ್ರಮಾಣವನ್ನು ನೀವು ಬಳಸಿದಾಗ ನೀವು ಒಂದು ಚಾರ್ಜ್ ಸೈಕಲ್ ಅನ್ನು ಪೂರ್ಣಗೊಳಿಸುತ್ತೀರಿ. ಕಾಲಾನಂತರದಲ್ಲಿ ಬ್ಯಾಟರಿ ಸಾಮರ್ಥ್ಯದಲ್ಲಿನ ನಿರೀಕ್ಷಿತ ಕ್ಷೀಣಿಸುವಿಕೆಯನ್ನು ಗಣನೆಗೆ ತೆಗೆದುಕೊಳ್ಳಲು ಸಂಪೂರ್ಣ ಚಾರ್ಜ್ ಸೈಕಲ್ ಅನ್ನು ಮೂಲ ಸಾಮರ್ಥ್ಯದ ಶೇಕಡಾ 80 ಮತ್ತು ಶೇಕಡಾ 100 ರ ನಡುವೆ ಸಾಮಾನ್ಯೀಕರಿಸಲಾಗುತ್ತದೆ.
iPhone X ಮತ್ತು ಅದಕ್ಕಿಂತ ಹಿಂದಿನ ಮಾಡಲ್‌ಗಳೊಂದಿಗೆ, ಪರಿಶೀಲಿಸಲಾಗಿಲ್ಲ ಎಂಬುದರ ಬದಲು, ನೀವು "ಪ್ರಮುಖ ಬ್ಯಾಟರಿ ಸಂದೇಶ" ಎಂಬುದನ್ನು ನೋಡಬಹುದು. ಈ iPhone ಗೆ ಬ್ಯಾಟರಿಯ ಆರೋಗ್ಯವನ್ನು ನಿರ್ಧರಿಸಲು ಸಾಧ್ಯವಾಗುತ್ತಿಲ್ಲ."